ಯಾರು ದೊಡ್ಡವರು..??
(ಕಥೆ)
ಕಮಲಾಪುರ ಎಂಬ ರಾಜ್ಯದಲ್ಲಿ ಮದಗಜ ಎಂಬ ರಾಜ ರಾಜ್ಯವನ್ನಾಳುತ್ತಿದ್ದ. ಮದಗಜನಿಗೆ ತನ್ನ ರಾಜ್ಯದಲ್ಲಿ ತಾನೇ ದೊಡ್ಡವನು ಎಂಬ ಅಹಂ ತುಂಬಾ ಇತ್ತು . ತನ್ನ ರಾಜ್ಯದಲ್ಲಿ ರೈತರು , ವೈದ್ಯರು, ಕಮ್ಮಾರರು, ಪುರೋಹಿತರು ಎಲ್ಲಾ ವರ್ಗದ ಜನರು ನೆಮ್ಮದಿಯಿಂದ ಬದುಕಲು ನಾನೇ ಕಾರಣ; ಈ ರಾಜ್ಯ ನನ್ನಿಂದಲೇ ಈ ರಾಜ್ಯ ನಡೆಯುತ್ತಿದೆ, ಜನರು ಸುಖವಾಗಿ ಜೀವನ ಸಾಗಿಸುತ್ತಿದ್ದಾರೆ ಎಂಬ ಭಾವನೆ ರಾಜನ ಮನದಲ್ಲಿ ಬಂದಿತು.
ತನ್ನ ರಾಜ್ಯದಲ್ಲಿ ತಾನೆ ದೊಡ್ಡವನು ಎಂದು ಹೇಳಿಕೊಳ್ಳಲು ಪ್ರಾರಂಭಿಸಿದ. ಎಲ್ಲರೂ ತನ್ನನ್ನು ದೊಡ್ಡವನೆನ್ನಬೇಕು ಹಾಗೂ ತಾನು ಹೇಳಿದಂತೆ ಕೇಳಬೇಕೆಂದು ಮತ್ತು ರಾಜನೇ ಎಲ್ಲರಿಗಿಂತ ದೊಡ್ಡವನೆಂದು ರಾಜ್ಯದಲ್ಲಿ ಡಂಗುರ ಸಾರಿದನು. ಎಲ್ಲರೂ ರಾಜನೇ ದೊಡ್ಡವನೆಂದು ನಂಬಿದರು. ರಾಜನನ್ನು ಪೂಜಿಸತೊಡಗಿದರು. ರಾಜನ ಮಾತೆ ಸರ್ವಸ್ವವಾಯಿತು.
ಕೆಲವು ದಿನಗಳು ಕಳೆದ ನಂತರ ರಾಜನು ಮಾರುವೇಶವನ್ನು ಧರಿಸಿ ರಾಜ್ಯದಲ್ಲಿ ಸಂಚರಿಸತೊಡಗಿದನು. ಮಾರುವೇಷದಲ್ಲಿದ್ದ ರಾಜನನ್ನು ಯಾರು ಗುರುತಿಸಲಾಗಲಿಲ್ಲ. ರಾಜ್ಯದಲ್ಲಿ ಎಲ್ಲರೂ ಸುಖವಾಗಿ ಸಂತೋಷದಿಂದ ಜೀವನ ಸಾಗಿಸುತ್ತಿರುವುದನ್ನು ಕಂಡನು. ಒಬ್ಬ ರೈತ ಒಂದು ಮರದ ಕೆಳಗೆ ಸುಖವಾಗಿ ಮಲಗಿರುವುದನ್ನು ಕಂಡು ಅವನನ್ನು ಎಚ್ಚರಗೊಳಿಸಿ " ನೀನು ಇಷ್ಟು ಸುಖವಾಗಿ ಮಲಗುವುದಕ್ಕೆ ಕಾರಣ ಯಾರು ?ಎಂದು ಕೇಳಿದ. ಅವನು, "ಮಹಾಶಯ, ನಾನೊಬ್ಬ ರೈತ. ಹೊಲದಲ್ಲಿ ಚೆನ್ನಾಗಿ ದುಡಿದು ಹೊಟ್ಟೆ ತುಂಬಾ ಊಟ ಮಾಡಿ ನೆಮ್ಮದಿಯಾಗಿ ಈ ಮರದ ಕೆಳಗೆ ಮಲಗಿರುವೆ. ಭೂಮಿತಾಯಿ ತುಂಬಾ ದೊಡ್ಡವಳು. ನನ್ನ ನೆಮ್ಮದಿಗೆ ಅವಳೇ ಕಾರಣ." ಎಂದನು.
ರಾಜನು ಹಾಗೆಯೇ ಮುಂದೆ ಹೊರಟಾಗ ಅಲ್ಲೊಂದು ವೈದ್ಯ ಶಾಲೆಯು ಎದುರು ನಿಂತ ಜನರನ್ನು ರಾಜನು ಮಾತನಾಡಿಸಿದಾಗ, ಅಲ್ಲಿನ ಜನ " ಈ ವೈದ್ಯ ತುಂಬಾ ಜಾಣ . ಅನೇಕ ರೋಗಗಳನ್ನು ವಾಸಿ ಮಾಡಿದ್ದಾನೆ. ಇವನಿಂದಾಗಿ ನಾವು ಇಂದು ಬದುಕಿದ್ದೇವೆ . ಇವನಿಗಿಂತ ಯಾರು ದೊಡ್ಡವರಿಲ್ಲ." ಎಂದು ವೈದ್ಯನನ್ನು ಕೊಂಡಾಡಿದರು. ಹಾಗೆಯೇ ರಾಜನು ಮುಂದೆ ಹೋದಾಗ ಒಂದು ಧರ್ಮಛತ್ರದ ಎದುರು ನಿಂತು ಅಲ್ಲಿನ ಜನರನ್ನು ಮಾತನಾಡಿಸಿದನು. ಅಲ್ಲಿ ಕೆಲವರು " ಧರ್ಮಛತ್ರ ದ ದಾನಿಗಳು ತುಂಬಾ ದೊಡ್ಡವರು. ಇವರು ಹಸಿದವರಿಗೆ ಅನ್ನವನ್ನು ನೀಡುತ್ತಾ ಬಂದಿದ್ದಾರೆ . ಅನೇಕ ನಿರಾಶ್ರಿತರಿಗೆ ,ಬಡವರಿಗೆ, ದಾರಿಹೋಕರಿಗೆ ಅನ್ನದಾನವನ್ನು ಮಾಡಿದ್ದಾರೆ. ಇವರಿಗಿಂತ ದೊಡ್ಡವರಿಲ್ಲ " ಎಂದು ಹೇಳಿದರು. ರಾಜನು ಹಾಗೆಯೇ ಮುಂದೆ ಹೋದಾಗ ಒಬ್ಬ ಯುವಕ ತನ್ನ ತಂದೆತಾಯಿಗಳಿಗೆ ನಮಸ್ಕರಿಸುತ್ತಾ ಇದ್ದ. ಆಗ ರಾಜನು ಯುವಕನನ್ನು ಮಾತನಾಡಿಸಿದನು. ಆ ಯುವಕ " ನನ್ನ ತಂದೆ-ತಾಯಿಗಳೇ ನನಗೆ ದೊಡ್ಡವರು. ಅವರು ನನಗೆ ಜನ್ಮ ನೀಡಿದ್ದಾರೆ . ಪೋಷಿಸಿ ಬೆಳೆಸಿದ್ದಾರೆ . ಅವರ ಋಣ ಎಂದಿಗೂ ತೀರಿಸಲಾಗದು " ಎಂದು ಹೇಳಿದನು . ಹೀಗೆ ರಾಜನು ಹಲವರನ್ನು ಭೇಟಿಯಾದಾಗ ಅವರವರ ದೃಷ್ಟಿಯಲ್ಲಿ ದೊಡ್ಡವರು ಎನ್ನುವ ಅಭಿಪ್ರಾಯ ಬೇರೆ ಬೇರೆಯಾಗಿತ್ತು.
ಕೊನೆಗೆ ರಾಜ ಒಂದು ನಿರ್ಣಯಕ್ಕೆ ಬರುತ್ತಾನೆ.
ಈ ಜಗತ್ತಿನಲ್ಲಿ ಒಬ್ಬರೇ ಯಾರೂ " ದೊಡ್ಡವರು" ಎಂದು ಎನಿಸಿಕೊಂಡವರು ಇಲ್ಲ . ನಾನೂ ಈ ಜಗತ್ತಿನಲ್ಲಿ ದೊಡ್ಡವನಲ್ಲ. ನಾನು ಕೆಲವರಿಗೆ ಮಾತ್ರ ದೊಡ್ಡವನಾಗಿರಬಹುದು . ಆದರೆ ನನಗಿಂತ ದೊಡ್ಡವರು ಹಲವಾರು ಜನರಿದ್ದಾರೆ. ಎಂಬ ಅಭಿಪ್ರಾಯಕ್ಕೆ ಬಂದನು . ಅಂದಿನಿಂದ ರಾಜನು ತಾನೇ ದೊಡ್ಡವನು ಎಂಬುದನ್ನು ಮರೆತು ಪ್ರಜೆಗಳ ಸೇವೆಯಲ್ಲಿ ತೊಡಗಿದನು.
=> ವೆಂಕಟೇಶ ಚಾಗಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ