***ಕಾಡಿನ ನ್ಯಾಯ***
( ಮಕ್ಕಳ ಕಥೆ )
ಅದೊಂದು ದಟ್ಟವಾದ ಅರಣ್ಯ. ಆ ಅರಣ್ಯದಲ್ಲಿ ಪ್ರಾಣಿ ಪಕ್ಷಿ ಕ್ರಿಮಿ, ಕ್ರೀಟಗಳು ಸೇರಿದಂತೆ ಹಲವಾರು ಜೀವಿಗಳು ಸಣ್ಣ ಸಸ್ಯದಿಂದ ಹಿಡಿದು ಅತ್ಯಂತ ಎತ್ತರವಾದ ಮರ ಗಿಡಗಳು ಅಲ್ಲಿ ಇದ್ದವು. ಆ ಕಾಡು ಅದೆಷ್ಟು ಶಾಂತವಾಗಿತ್ತು ಎಂದರೆ ಅಲ್ಲಿ ವಾಸಿಸುತ್ತಿದ್ದ ಜೀವಿಗಳೆಲ್ಲ ಅತ್ಯಂತ ಸುಖವಾಗಿ ಇದ್ದವು. ತಮಗೆ ಬೇಕಾದಷ್ಟು ಆಹಾರವನ್ನು ಅಂದಿನ ದಿನವೇ ಹುಡುಕಿ ತಮ್ಮ ಹೊಟ್ಟೆ ತುಂಬಿಸಿಕೊಂಡು ರಾತ್ರಿಯ ವೇಳೆ ಸುಖವಾಗಿ ನಿದ್ದೆ ಮಾಡುತ್ತಿದ್ದವು. ಪ್ರಕೃತಿಯ ಅವಘಡಗಳು ಸಂಭವಿಸಿದಾಗ ಎಲ್ಲಾ ಪ್ರಾಣಿಗಳು ಜಾಗೃತಗೊಂಡು ತಮ್ಮನ್ನು ತಾವು ರಕ್ಷಿಸುವುದರ ಜೊತೆಗೆ ಇತರ ಪ್ರಾಣಿಗಳನ್ನು ಸಹ ಆದಷ್ಟು ಮಟ್ಟಿಗೆ ರಕ್ಷಿಸಿ ಅವುಗಳ ಪ್ರಾಣ ಉಳಿಸುತ್ತಿದ್ದವು.
ಒಮ್ಮೆ ಒಂದು ಸಿಂಹ ಬೇರೊಂದು ಕಾಡಿನಿಂದ ಆ ಕಾಡಿಗೆ ಪ್ರವೇಶಿಸಿತು. ಕಾಡನಲ್ಲಿ ವಾಸಿಸುತ್ತಿದ್ದ ಪ್ರಾಣಿಗಳೆಲ್ಲ ಸುಖವಾಗಿ ಸಂತೋಷದಿಂದ ಇರುವುದನ್ನು ಕಂಡು "ಆಹಾ... ಈ ಕಾಡು ತುಂಬಾ ಸ್ವರ್ಗದಂತಿದೆ. ಈ ಕಾಡಿನಲ್ಲಿ ನನಗೆ ಬೇಕಾದಷ್ಟು ತಿನ್ನಲು ಪ್ರಾಣಿಗಳು ಸಿಗುತ್ತವೆ. ಈ ಕಾಡಿನ ಪ್ರಾಣಿಗಳೆಲ್ಲ ಪ್ರತಿದಿನವೂ ಸುಖವಾಗಿ ಉಂಡು ತುಂಬಾ ದುಷ್ಟಪುಷ್ಟಗೊಂಡಿವೆ . ನಾನು ಇಲ್ಲಿಯೇ ಇದ್ದರೆ ಯಾವುದೇ ಕಷ್ಟವಿಲ್ಲದೆ ಇವುಗಳನ್ನು ತಿನ್ನುತ್ತಾ ಸುಖವಾಗಿ ಕಾಲ ಕಳೆಯ ಬಹುದು" ಎಂದು ಯೋಚಿಸಿತು. ಅದರಂತೆಯೇ ಆ ಸಿಂಹವು ತನ್ನ ಕಾಡಿಗೆ ಹಿಂದಿರುಗಿ ಅಲ್ಲಿದ್ದ ತನ್ನ ಹೆಂಡತಿ ಮತ್ತು ಮಕ್ಕಳಿಗೆ ತಾನು ಕಂಡ ಕಾಡು ಸ್ವರ್ಗದಂತಿರುವುದನ್ನು ಬಲು ವರ್ಣನೀಯವಾಗಿ ಹೇಳಿತು . ಇದರಿಂದಾಗಿ ಸಿಂಹ ಕುಟುಂಬದ ಎಲ್ಲಾ ಸದಸ್ಯರು ಅದೇ ಕಾಡಿಗೆ ಹೋಗೋಣ ಎಂದು ನಿರ್ಧರಿಸಿದರು. ಅದರಂತೆ ಸಿಂಹವು ತನ್ನ ಕುಟುಂಬದೊಂದಿಗೆ ತಾನು ಕಂಡಿದ್ದ ಸ್ವರ್ಗದಂತಹ ಕಾಡಿಗೆ ತನ್ನ ಕುಟುಂಬದೊಂದಿಗೆ ಪ್ರಯಾಣ ಬೆಳೆಸಿತು.
ಸಿಂಹವು ಸ್ವರ್ಗದಂತ ಕಾಡಿಗೆ ತನ್ನ ಕುಟುಂಬದೊಂದಿಗೆ ಬಂದು ನೆಲೆಸಿತು. ಪ್ರತಿ ದಿನವೂ ಬೇಟೆಯಾಡುತ್ತಾ ತನ್ನ ಕುಟುಂಬದೊಂದಿಗೆ ಸುಖವಾಗಿ ಉಂಡು ಬದುಕ ತೊಡಗಿತು. ಸಾಕಷ್ಟು ಆಹಾರ ಸಿಂಹಕ್ಕೆ ದೊರಕುತ್ತಿದ್ದರಿಂದ ಸಿಂಹವು ತನ್ನ ಕುಟುಂಬದೊಂದಿಗೆ ಬೇರೆಡೆ ಬೇಟೆಯಾಡಲು ಹೋಗದೆ ಇರುವ ಸ್ಥಳದಲ್ಲಿಯೇ ತನ್ನ ಬೇಟೆಯನ್ನು ತರಲು ಸಿಂಹ ತನ್ನ ಹೆಂಡತಿಗೆ ಹೇಳುತ್ತಿತ್ತು. ಸಿಂಹದ ಹೆಂಡತಿಯೂ ಸಹ ಕೆಲವು ದಿನಗಳವರೆಗೆ ಬೇಟೆಯಾಡಿ ತನ್ನ ಹಾಗೂ ತನ್ನ ಗಂಡನ ಆಹಾರವನ್ನು ತರಲು ತನ್ನ ಮಕ್ಕಳಿಗೆ ಹೇಳಿತು . ಮಕ್ಕಳು ತರುತ್ತಿದ್ದ ಬೇಟೆಯನ್ನು ಸಿಂಹ ಹಾಗೂ ಸಿಂಹಿಣಿ ತಿಂದು ತಾವು ವಾಸಿಸುತ್ತಿದ್ದ ಸ್ಥಳದಲ್ಲಿಯೇ ಸುಖವಾಗಿ ಮಲಗಿ ಜೀವನ ಪೂರ್ತಿ ವಿಶ್ರಾಂತಿ ಪಡೆಯ ತೊಡಗಿದವು.
ಕೆಲವು ದಿನಗಳ ನಂತರ ಸಿಂಹದ ಮರಿಗಳಿಗೆ ತಾವು ಕೂಡ ತಮ್ಮ ತಂದೆ ತಾಯಿಯಂತೆ ತಮ್ಮ ಮನೆಯಲ್ಲಿಯೇ ಇದ್ದುಕೊಂಡು ಸುಖವಾಗಿ ಉಂಡು ಕಾಲ ಕಳೆಯಬೇಕು ಎಂದು ತೀರ್ಮಾನಿಸಿದವು. ಅದಕ್ಕೆಂದೆ ಸಿಂಹದ ಮರಿಗಳು ಚಿಕ್ಕ ಪುಟ್ಟ ಪ್ರಾಣಿಗಳನ್ನು ಬೇಟೆಯಾಡಿ ತಮ್ಮ ಗುಹೆಗಳಲ್ಲಿ ತಂದು ಇಡತೊಡಗಿದವು. ಒಂದೇ ದಿನದಲ್ಲಿ ಒಂದು ವಾರಕ್ಕೆ ಬೇಕಾಗುವಷ್ಟು ಆಹಾರವನ್ನ ಸಂಗ್ರಹಿಸಿ ತಾವಿದ್ದ ಗುಹೆಯಲ್ಲಿ ಇಟ್ಟು ತಮ್ಮ ತಂದೆ ತಾಯಿಗಳೊಂದಿಗೆ ಆರಾಮದಿಂದ ಕಾಲ ಕಳೆದ ತೊಡಗಿದವು.
ಕೆಲವೇ ದಿನಗಳಲ್ಲಿ ಸಿಂಹ ಹಾಗೂ ಸಿಂಹಿಣಿ ಮತ್ತು ಸಿಂಹದ ಮರಿಗಳಿಗೆ ಅನಾರೋಗ್ಯ ಕಾಣಿಸಿಕೊಂಡಿತು . ಸಿಂಹವು ಬೇಟೆಯಾಡಲು ಅಶಕ್ತಗೊಂಡಿತು. ಅದರಂತೆ ಸಿಂಹಿಣಿ ಹಾಗೂ ಸಿಂಹದ ಮರಿಗಳಿಗೂ ಹೊರಗಡೆ ಹೋಗಿ ಬೇಟೆಯಾಡಿಕೊಂಡು ಬರುವಷ್ಟು ತ್ರಾಣ ಇಲ್ಲದಂತಾಯಿತು. ಸಿಂಹ ತಾನಿರುವ ಗುಹೆಯಲ್ಲೇ ಜೋರಾಗಿ ಗರ್ಜಿಸಿ ಹೆಂಡತಿಯನ್ನು ಹಿಂಸಿಸಿತು. ಇದರಿಂದಾಗಿ ಸಿಂಹಿಣಿ ಹಾಗೂ ಸಿಂಹದ ಮರಿಗಳು ಗುಹೆಯನ್ನು ಬಿಟ್ಟು ಹೊರ ಬಂದವು. ಸಿಂಹಕ್ಕೆ ಆಹಾರ ಸಿಗದೇ ನಿತ್ರಾಣಗೊಂಡು ಬೇಟೆಯಾಡಲು ಶಕ್ತಿ ಇಲ್ಲದಂತಾಯಿತು. ಸಿಂಹ ಹೊರಬಂದು ಬೇಟೆಗೆ ಯಾಡಬೇಕು ಎನ್ನುವಷ್ಟರಲ್ಲಿ ಕಾಡಿನ ಪ್ರಾಣಿಗಳೆಲ್ಲ ಎಚ್ಚೆತ್ತುಕೊಂಡು ಸಿಂಹದಿಂದ ಬಹು ದೂರ ಹೊರಟುಹೋಗಿದ್ದವು. ಇದರಿಂದಾಗಿ ಸಿಂಹಕ್ಕೆ ಚಿಕ್ಕಪುಟ್ಟ ಪ್ರಾಣಿಗಳು ಸಹ ಸಿಗದೇ ಹಸಿವಿನಿಂದ ಸತ್ತು ಹೋಯಿತು.
ಸಿಂಹದ ಹೆಂಡತಿ ಹಾಗೂ ಸಿಂಹದ ಮರಿಗಳು ತುಂಬಾ ಆಲಸ್ಯದಿಂದಾಗಿ ಅನಾರೋಗ್ಯದಿಂದ ನರಳ ತೊಡಗಿದವು. ಚಿಕ್ಕ ಪುಟ್ಟ ಬೇಟೆಯಾಡಬೇಕು ಎಂದುಕೊಂಡರೂ ಅನಾರೋಗ್ಯದ ಕಾರಣದಿಂದಾಗಿ ಸಿಂಹಿಣಿ ಹಾಗೂ ಸಿಂಹದ ಮರಿಗಳು ಹಸಿವಿನಿಂದ ಬಳಲತೊಡಗಿದವು. ಕೆಲವೇ ದಿನಗಳಿಗೆ ಅವುಗಳ ರೋಗ ಉಲ್ಬಣಗೊಂಡಿತು. ಸಿಂಹಿಣಿ ಹಾಗೂ ಸಿಂಹದ ಮರಿಗಳು ಇದ್ದಲ್ಲೇಯೇ ಬಿದ್ದಿರುವುದನ್ನು ಕಂಡು ಸಣ್ಣ ಪುಟ್ಟ ಪ್ರಾಣಿಗಳು ದೂರದಿಂದ ನೋಡುತ್ತಾ ಇವುಗಳು ನಮ್ಮನ್ನು ತಿನ್ನಲು ಹೊಂಚು ಹಾಕುತ್ತಿವೆ ಎಂದುಕೊಂಡು ದೂರ ಓಡಿ ಹೋಗುತ್ತಿದ್ದವು.
ಹೀಗೆಯೇ ಕೆಲವೇ ದಿನಗಳಲ್ಲಿ ಸಿಂಹಿಣಿ ಹಾಗೂ ಸಿಂಹದ ಮರಿಗಳು ಸ್ವರ್ಗದಂತಹ ಕಾಡಿನಲ್ಲಿ ಆಹಾರಕ್ಕಾಗಿ ಪರದಾಡಿ ಹಸಿವು ಹಾಗೂ ಅನಾರೋಗ್ಯದಿಂದ ನರಳಿ ನರಳಿ ತಾವು ಇದ್ದಲ್ಲಿಯೇ ಪ್ರಾಣಬಿಟ್ಟವು. ಅವುಗಳ ದೇಹ ಹಲವು ಪಕ್ಷಿಗಳಿಗೆ ಕೀಟಗಳಿಗೆ ಆಹಾರವಾಯಿತು. ಸಿಂಹಗಳ ಮರಣದ ನಂತರ ಕಾಡಿನಲ್ಲಿ ಮತ್ತೆ ಶಾಂತಿ ಮೂಡಿತು.
ವೆಂಕಟೇಶ ಚಾಗಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ