**ಚಿಟ್ಟೆಗೆ ಬಣ್ಣ ಹೇಗೆ ಬಂತು..?**
(ಮಕ್ಕಳ ಕಥೆ)
"ಅಲ್ಲಿ ಕೆಸರು ಇದೆ ಜಾರಿ ಬೀಳುವೆ. ನೋಡಿಕೊಂಡು ಬಾ.." ಅಮ್ಮ ಆಗಿಂದಾಗ್ಗೆ ಎಚ್ಚರಿಸುತ್ತಿದ್ದರೂ ಖುಷಿ ಚಿಟ್ಟಯನ್ನು ನೋಡುತ್ತ ಅಮ್ಮನನ್ನು ಹಿಂಬಾಲಿಸಿಕೊಂಡು ಬರುತ್ತಿದ್ದಳು.
" ಅಯ್ಯೋ ಅಮ್ಮಾ.. ಅದೆಷ್ಟು ಸಾರಿ ಹೇಳ್ತಿಯಾ .. ನಾನು ದೊಡ್ಡವಳಾಗಿದ್ದೀನಿ ಗೊತ್ತಾ.. ನನಗೂ ಎಲ್ಲಾ ಗೊತ್ತಾಗುತ್ತೆ.. ನೀನೇ ಸರಿಯಾಗಿ ನೋಡಿಕೊಂಡು ನಡೆ. ಜಾರಿ ಬಿದ್ರೆ ತಲೆಮೇಲೆ ಇರೋ ಬುತ್ತಿಗಂಟು ಕೆಳಗೆ ಬಿದ್ದು ಎಲ್ಲಾ ಕೆಸರಾಗಿ ಬಿಡುತ್ತೆ.. ಅಪ್ಪಾ ನಿನಗೆ ಬೈಯೋದು.. ನನಗಲ್ಲ "
" ಹೌದು .. ನೀನು ನನಗಿಂತ ದೊಡ್ಡವಳಾಗಿದ್ದೀಯಾ..ನಿನ್ನ ಮಾತೇ ಕೇಳಬೇಕು. ಜಾರಿ ಬಿದ್ದಾಗ ಅಳುವೆಲ್ಲಾ ಆಗ ಹೇಳ್ತೇನೆ.."
ಎಂದು ಖುಷಿಯನ್ನು ಎಚ್ಚರಿಸುತ್ತಾ ಮುಂದೆ ಮುಂದೆ ಸಾಗುತ್ತಿದ್ದರು.
ಖುಷಿಗೆ ದಾರಿಯ ಅಕ್ಕಪಕ್ಕದ ಗಿಡಗಳ ಮೇಲೆ ಹಾರಾಡುತ್ತಿದ್ದ ಚಿಟ್ಟೆಗಳ ಮೇಲೆಯೇ ಕಣ್ಣು. ಅವುಗಳಲ್ಲಿ ಬಣ್ಣ ಬಣ್ಣದ ಚಿಟ್ಟೆಗಳು ಅವಳನ್ನು ಸೆಳೆಯುತ್ತಿದ್ದವು. ಒಂದಾದರೂ ಚಿಟ್ಟಯನ್ನು ಹಿಡಿಯಬೇಕೆಂಬ ಪ್ರಯತ್ನ . ಆದರೆ ಆ ಪ್ರಯತ್ನ ಹಲವುಬಾರಿ ವಿಫಲವಾದುದ್ದೇ ಹೆಚ್ಚು.
"ಅಮ್ಮಾ.. ಈ ಚಿಟ್ಟೆಗಳಿಗೆ ಬಣ್ಣ ಹೇಗೆ ಬಂತು..?" ಎಂದು ಖುಷಿ ಕುತೂಹಲದಿಂದ ಕೇಳಿದಳು.
"ಅವುಗಳೆಲ್ಲಾ ಬ್ಯೂಟಿಪಾರ್ಲರ್ ಗೆ ಹೋಗಿ ಬಣ್ಣ ಹಚ್ಚಿಕೊಂಡು ಬಂದಿವೆಯಾ..? ಎಂದು ಮೇಲಿಂದ ಮೇಲೆ ಪ್ರಶ್ನೆ ಕೇಳಿದಾಗ " ಹೌದು .. ಪೇಟೆಗೆ ಹೋಗಿ ಬಣ್ಣ ಹಚ್ಚಿಕೊಂಡು ಬಂದು ಇಲ್ಲಿ ಹಾರುತ್ತಿವೆ.. ಸುಮ್ಮೆ ಬರ್ತೀಯಾ" ಎಂದು ಅಮ್ಮಾ ರೇಗಾಡಿದರು.
"ಯಾವ ಬ್ಯೂಟಿ ಪಾರ್ಲರ್ರು..? ಅದೇ .. ಪಕ್ಕದ ಮನೆ ಸುಮಾ ಅಂಟಿ ಹೋಗ್ತಾರಲ್ಲಾ ಅದೇ ಬ್ಯೂಟಿ ಪಾರ್ಲರಾ..? ಈ ಎಲ್ಲಾ ಚಿಟ್ಟೆಗಳಿಗೂ ಬಣ್ಣ ಹಚ್ಚೋದು ತುಂಬಾ ಕಷ್ಟ ಅಲ್ವೇನಮ್ಮಾ.." ಎಂದಳು ಖುಷಿ.
"ಹೌದು .. ಸುಮ್ಮೆ ಬಾ.." ಎನ್ನುತ್ತಾ ಮುಂದೆ ಸಾಗಿದರು ಅಮ್ಮಾ.
ಹೇಗಾದರೂ ಮಾಡಿ ಒಂದು ಚಿಟ್ಟಯನ್ನು ಹಿಡಿಯಲೇಬೇಕು ಎಂಬ ನಿರ್ಧಾರ ಮಾಡಿ .. ಅಮ್ಮಾ ಮಂದೆ ಹೋಗುತ್ತಿರುವಂತೆ ಗಿಡದ ಮೇಲೆ ಕುಳಿತಿದ್ದ ಒಂದು ಚಿಟ್ಟಯನ್ನು ಖುಷಿ ಹಿಡಿದೇ ಬಿಟ್ಟಳು..
" ಅಮ್ಮಾ... ನೋಡಿಲ್ಲಿ ಚಿಟ್ಟೆ ಹಿಡಿದುಬಿಟ್ಟೆ..ವ್ಹಾವ್ ಎಷ್ಷು ಸುಂದರವಾಗಿದೆ ಈ ಬಣ್ಣದ ಚಿಟ್ಟೆ...!"
" ಖುಷಿ... ಬಿಡು ಅದನ್ನು.. ಅದಕ್ಕೆ ನೋವಾಗಲ್ವಾ.."
"ಹೌದಾ ಅಮ್ಮಾ ..ಇದಕ್ಕೂ ನೋವಾಗುತ್ತಾ..?"
"ಹೌದು ಮತ್ತೆ .. ನಿನ್ನನ್ನು ಯಾರಾದರೂ ಬಲವಂತವಾಗಿ ಗಟ್ಟಿಯಾಗಿ ಹಿಡಿದುಕೊಂಡರೆ ನೋವಾಗಲ್ವಾ.. ಬಿಟ್ಟು ಬಿಡು ಅದನ್ನ.. ಅದು ಅದರ ಸ್ನೇಹಿತರ ಜೊತೆ ಆಟ ಆಡುತ್ತೆ..." ಎಂದರು ಅಮ್ಮಾ.
" ಹೌದಲ್ವಾ.. ಅಯ್ಯೋ ಅದೆಷ್ಟು ಒದ್ದಾಡ್ತಿದೆ.. ನೋವಾಗ್ತಿರಬಹುದು ಅನಿಸುತ್ತದೆ . ಬಿಟ್ಟುಬಿಡೋಣ" ಎಂದು ಮನದಲ್ಲೇ ಅಂದುಕೊಂಡಳು ಖುಷಿ.
"ನಿನ್ನ ಬಿಟ್ಟು ಬಿಡ್ತೇನೆ.. ಆದರೆ ಒಂದು ಪ್ರಶ್ನೆ .. ನಿಂಗೆ ಬಣ್ಣ ಹೇಗೆ ಬಂತು ಹೇಳು ?" ಎಂದಳು ಖುಷಿ.
" ಖುಷಿ .. ಅದಕ್ಕೇನು ಮಾತಾಡೋಕೆ ಬರುತ್ತಾ..? ಬಿಡು ಅದನ್ನ" ಎಂದರು ಅಮ್ಮ.
"ಹೌದಲ್ವಾ ನಿನಗೆ ಮಾತಾಡೋಕೆ ಬರಲ್ಲ.. ನಿಮ್ಮಲ್ಲಿ ಯಾರಾಗಾರೂ ಮಾತಾಡೋಕೆ ಬಂದರೆ ನನ್ನ ಪ್ರಶ್ನೆಗೆ ಖಂಡಿತಾ ಉತ್ತರ ಹೇಳಬೇಕು.. ಗೊತ್ತಾಯ್ತಾ..ಈಗ ಹೋಗು ನಿನ್ನ ಸ್ನೇಹಿತರ ಜೊತೆ ಆಟವಾಡು..ಬೈ ಬೈ.." ಎನ್ನುತ್ತಾ ಚಿಟ್ಟೆ ಯನ್ನು ಹಾರಿಬಿಟ್ಟಳು. ಚಿಟ್ಟೆ ಹಾರುತ್ತಾ ಹಾರುತ್ತಾ ಹೋಗಿ ಒಂದು ಹೂವಿನ ಮೇಲೆ ಕುಳಿತುಕೊಂಡಿತು. ಖುಷಿ ಅನ್ಮನ ಕೈ ಹಿಡಿದುಕೊಂಡು ಚಿಟ್ಟಯನ್ನು ನೋಡುತ್ತಾ ಮುಂದೆ ಮುಂದೆ ಸಾಗಿದಳು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ