ಶುಕ್ರವಾರ, ಅಕ್ಟೋಬರ್ 2, 2026

ಬೆಳೆಯುವ ಸಿರಿ | ಮಕ್ಕಳ ಕಥೆ | ವೆಂಕಟೇಶ ಚಾಗಿ | beleyuva siri | makkala kathe | venkatesh chagi | children story

 ಬೆಳೆಯುವ ಸಿರಿ


(ಮಕ್ಕಳ ಕಥೆ)

ಅಂದು ಶಾಲೆಗೆ ರಜೆ ಆದರೂ ಗುರುಗಳಾದ ಶ್ರೀಕಾಂತ ಅಂದು ಶಾಲೆಗೆ ಬಂದಿದ್ದರು. ಶ್ರೀಕಾಂತ್ ಶ್ರಮಜೀವಿ ಶಿಕ್ಷಕ. ಮಕ್ಕಳ ಏಳಿಗೆಗಾಗಿ ಮಕ್ಕಳ ಉನ್ನತಿಗಾಗಿ ಶ್ರಮಿಸುವ ಶಿಕ್ಷಕ . ರಜೆ ಇದ್ದರೂ ಶಾಲೆಗೆ ಬಂದು ಶಾಲಾ ಪರಿಸರ ಸ್ವಚ್ಛತೆ ಕೆಲಸಗಳನ್ನು ಮಾಡುತ್ತಿದ್ದರು . ಅವರ  ತಂದೆ ಕೂಡ ಒಬ್ಬ ಶಿಕ್ಷಕರಾಗಿದ್ದರು. ತಮ್ಮ ತಂದೆ ತಾಯಿಗಳ ಉತ್ತಮ ಮಾರ್ಗದರ್ಶನದಲ್ಲಿ ಒಬ್ಬ ಉತ್ತಮ ಹಾಗೂ ಆದರ್ಶ ಶಿಕ್ಷಕರಾಗಿ ಬೆಳೆದರು. ಗ್ರಾಮೀಣ ಭಾಗದ ಶಾಲೆಯಲ್ಲಿ ಸೇವೆ ಸಲ್ಲಿಸುವ ಸದುದ್ದೇಶದಿಂದ ಸ್ವತಃ ತಾವೇ ಈ ಹಳ್ಳಿಗೆ ನೇಮಕಾತಿ ಹೊಂದಿದ್ದರು. ಕೆಲವೇ ದಿನಗಳಲ್ಲಿ ತಮ್ಮ ಕೆಲಸ ಕಾರ್ಯಗಳಿಂದ ಗ್ರಾಮದ ಜನರಿಗೆಲ್ಲಾ ಚಿರಪರಿಚಿತರಾದರು.

  ಅಂದು ಕೂಡ ರಜೆ ಇದ್ದುದರಿಂದ ಶಾಲೆಗೆ ಬಂದು ತಮ್ಮ ಕೆಲಸಕಾರ್ಯಗಳಲ್ಲಿ ಮಗ್ನರಾಗಿದ್ದರು. ಶಾಲೆಗೆ ಬಂದಿರುವ ವಿಷಯ ತಿಳಿದ ಕೆಲವು ವಿದ್ಯಾರ್ಥಿಗಳು ಶಾಲೆಗೆ ಬಂದು ಶಿಕ್ಷಕರ ಕಾರ್ಯಗಳಲ್ಲಿ ಸಹಕರಿಸುತ್ತಿದ್ದರು. ಶಾಲೆಯ ಹಿಂದೆ ಕೆಲವು ವಿದ್ಯಾರ್ಥಿಗಳು ಅದೇನೋ ಗುಸುಗುಸು ಎಂದು ಮಾತನಾಡಿಕೊಳ್ಳುತ್ತಿರುವುದು ಶಿಕ್ಷಕರ ಗಮನಕ್ಕೆ ಬಂದಿತು. ಅವರಿಗೆ ಶಿಕ್ಷಕರು ಬಂದದ್ದು ಗಮನಕ್ಕೆ ಇರಲಿಲ್ಲ .ತಮ್ಮ ಕೆಲಸದಲ್ಲಿ ಮಗ್ನರಾಗಿದ್ದರು .ಶಿಕ್ಷಕ ಶ್ರೀ ಕಾಂತ್,  ಅವರು ಮಾಡುತ್ತಿದ್ದ ಕೆಲಸವನ್ನು ನೋಡಿ ದಿಗ್ಭ್ರಾಂತನಾದರು. ಆ ಮಕ್ಕಳು ಅದೇ ಶಾಲೆಯ ಹಿರಿಯ ತರಗತಿಯ ವಿದ್ಯಾರ್ಥಿಗಳು. ಮಕ್ಕಳು ಜೂಜು ಆಟದಲ್ಲಿ ತೊಡಗಿದ್ದರು. ಕೈಯಲ್ಲಿ ಗುಟಕಾ ,ತಂಬಾಕು ಮತ್ತೀತರ ವಸ್ತುಗಳನ್ನು ಹಿಡಿದು ಆಟ ಆಡುತ್ತಿದ್ದರು. ಶ್ರೀಕಾಂತ  ಈ ಸಂದರ್ಭದಲ್ಲಿ ಏನನ್ನು ಮಾತನಾಡದೆ ಆ ಮಕ್ಕಳ ಮಾಹಿತಿಯನ್ನು ಸಂಗ್ರಹಿಸಿದರು.

 ಆ ಮಕ್ಕಳು ಅದೇ ಊರಿನವರಾಗಿದ್ದರು. ಆ ಮಕ್ಕಳ ಪಾಲಕರೂ ಸಹ ಜೂಜು ಆಟಗಳಲ್ಲಿ ತೊಡಗುತ್ತಿದ್ದರು. ಮದ್ಯಪಾನ  ಇನ್ನೀತರ ಕೆಟ್ಟ ಚಟಗಳ ದಾಸರಾಗಿದ್ದರು. ಮಕ್ಕಳನ್ನು ತಮಗೆ ಬೇಕಾದ ವಸ್ತುಗಳನ್ನು ತರಲು ಬಳಸಿಕೊಳ್ಳುತ್ತಿದ್ದರಿಂದ ಆ ಮಕ್ಕಳಿಗೂ ಅದೇ ಚಟಗಳು ಅಂಟಿಕೊಂಡಿದ್ದವು. ಇದನ್ನರಿತ ಶಿಕ್ಷಕ ಶ್ರೀ ಕಾಂತ ನೇರವಾಗಿ ಅವರ ಮನೆಗೆ ತೆರಳಿದರು. ಆ ಮಕ್ಕಳ ಪಾಲಕರಿಗೆ ಬುದ್ದಿವಾದ ಹೇಳಿ ಮಕ್ಕಳ ಮೇಲಾಗುತ್ತಿರುವ ಪರಿಣಾಮಗಳ ಬಗ್ಗೆ ತಿಳಿ ಹೇಳಿದಾಗ ಆ ಪಾಲಕರು ಮುಂದೆ ಎಂದೂ ಈ ತಪ್ಪುಗಳನ್ನು ಮಾಡುವುದಿಲ್ಲವೆಂದು ಭರವಸೆಯನ್ನು ನೀಡಿ ಊರಿನ ದೇವರ ಹೆಸರಿನಲ್ಲಿ ನಾಲ್ಕು ಜನ ಹಿರಿಯರ ಮುಂದೆ ಪ್ರಮಾಣ ಮಾಡಿದರು. 

ಶ್ರೀಕಾಂತ್ ಕೆಲವು ದಿನಗಳ ಕಾಲ ಆ ಪಾಲಕರ ಚಟುವಟಿಕೆಗಳನ್ನು ವೀಕ್ಷಿಸಿದರು. ಅವರಲ್ಲಿ ಅಪೇಕ್ಷಾರ್ಹ ಬದಲಾವಣೆಗಳನ್ನು ಕಂಡು ಸಂತಸಪಟ್ಟರು. ಇತ್ತ ತಪ್ಪು ದಾರಿಯಲ್ಲಿ ಸಾಗುತ್ತಿದ್ದ ಮಕ್ಕಳಿಗೆ ತಿಳಿಹೇಳಿ ಅವರಿಗೆ ನೈತಿಕ ಹಾಗೂ ಮೌಲ್ಯ ಶಿಕ್ಷಣ ಬೋಧನೆ ಮಾಡಿದರು. ಅಲ್ಲದೇ ಪ್ರತಿ ದಿನ ಅವರ ಚಟುವಟಿಕೆಗಳನ್ನು ಗಮನಿಸುತ್ತಿದ್ದರು. ಕೆಲವು ದಿನಗಳು ಕಳೆದ ನಂತರ ಆ ಮಕ್ಕಳು ಉತ್ತಮ ನಡವಳಿಕೆಯನ್ನು ವ್ಯಕ್ತಪಡಿಸತೊಡಗಿದ್ದರು. ಮನೆಯಲ್ಲಿ , ಶಾಲೆಯಲ್ಲಿ ಉತ್ತಮ ಪರಿಸರದಿಂದಾಗಿ ಯಾವುದೇ ಚಟದಿಂದ ದೂರವಾಗಿಯೇ ಉಳಿದರು.

ಮಕ್ಕಳ ಸಂಖ್ಯೆ ಕಡಿಮೆಯಾದ್ದರಿಂದ ಶ್ರೀ ಕಾಂತ್ ಬೇರೆ ಶಾಲೆಗೆ ಹೋಗಲೇಬೇಕಾಯಿತು.ಹೀಗಾಗಿ ತಾವು ಇಷ್ಟ ಪಟ್ಟಿದ್ದ ಈ ಶಾಲೆಯಿಂದ ಸುಮಾರು ವರ್ಷಗಳ ಕಾಲ ದೂರವಾಗಿ ಉಳಿಯಬೇಕಾಯಿತು. ಒಮ್ಮೆ ಶ್ರೀ ಕಾಂತ್ ತಮ್ಮ ಹಳೆಯ ವಿದ್ಯಾರ್ಥಿಗಳನ್ನು ಬೇಟಿಯಾಗಲು ಆ ಶಾಲೆಗೆ ಬಂದಾಗ ಮೊದಲು ತಾವು ಮನಪರಿವರ್ತಿಸಿದ ಮಕ್ಕಳ ಬಗ್ಗೆ ವಿಚಾರಿಸಿದರು. ಆ ಮಕ್ಕಳು ಉತ್ತಮ ರೀತಿಯಲ್ಲಿ ವ್ಯಾಸಂಗ ಮಾಡಿ ಉನ್ನತ ವ್ಯಾಸಂಗ ಮಾಡುತ್ತಿರುವುದನ್ನು ಕೇಳಿ ತುಂಬಾ ಖುಷಿಪಟ್ಟರು. ಆ ಮಕ್ಕಳ ತಂದೆ ತಾಯಿಗಳು ಶ್ರೀ ಕಾಂತ್ ಗುರುಗಳನ್ನು ಭೇಟಿ ಮಾಡಿ ಕೃತಜ್ಞತೆಯನ್ನು ಸಲ್ಲಿಸಿದರು. ಮಕ್ಕಳಲ್ಲಿ ಉತ್ತಮ ಗುಣಗಳನ್ನು ಬಿತ್ತಿದರೆ ಒಳ್ಳೆಯ ವ್ಯಕ್ತಿ ಗಳಾಗುತ್ತಾರೆ ಎಂಬ ಸಂದೇಶವನ್ನು ಶಿಕ್ಷಕ ಶ್ರೀ ಕಾಂತ್ ಹಳ್ಳಿಗರಿಗೆ ತಿಳಿಸಿದರು.


=> ವೆಂಕಟೇಶ ಚಾಗಿ

ಕಾಮೆಂಟ್‌ಗಳಿಲ್ಲ: