ಸಮಯದ ಅಂಗಡಿ
( ಮಕ್ಕಳ ಕಥೆ )
ಒಂದಾನೊಂದು ಕಾಲದಲ್ಲಿ ಆನಂದಪುರ ಎಂಬ ಊರಿನಲ್ಲಿ ಸಹದತ್ತವರ್ಮ ಎಂಬ ವ್ಯಾಪಾರಿ ವಾಸವಾಗಿದ್ದನು. ಅವನ ಪುಟ್ಟದಾದ ಅಂಗಡಿಯಲ್ಲಿ ದಿನಸಿ ವಸ್ತುಗಳನ್ನು ಮಾರಾಟ ಮಾಡುತ್ತಾ ಬರುವ ಲಾಭಾಂಶದಲ್ಲಿ ಸುಖವಾಗಿ ಜೀವನ ಸಾಗಿಸುತ್ತಿದ್ದನು. ಅವನ ನಿಯತ್ತಿನ ವ್ಯಾಪಾರವನ್ನು ಕಂಡು ಜನರು ವಸ್ತುಗಳನ್ನು ಖರೀದಿಸಲು ಅವನ ಬಳಿ ಬರುತ್ತಿದ್ದರು. ಸರಿಯಾದ ತೂಕ ಹಾಗೂ ಬೆಲೆಯಲ್ಲಿ ಯಾವುದೇ ಮೋಸ ವಂಚನೆ ಅವನ ಬಳಿ ಇರಲಿಲ್ಲ.
ಸಹದತ್ತವರ್ಮನ ವ್ಯಾಪಾರ ಹಾಗೂ ಹೆಸರಿಗೆ ಕಳಂಕವನ್ನು ತರಲು ಹಲವಾರು ಜನ ಪ್ರಯತ್ನವನ್ನು ಮಾಡಿದ್ದರು. ಆದರೆ ಸಹದತ್ತವರ್ಮ ಯಾವುದೇ ಕುತಂತ್ರಕ್ಕೆ ಒಳಗಾಗದೇ ಜಾಣತನದಿಂದ ವ್ಯಾಪಾರ ಮಾಡುತ್ತಿದ್ದ. ಆದರೆ ಒಮ್ಮೆ ಅಂತಹ ಕುತಂತ್ರಕ್ಕೆ ಬಲಿಯಾಗಲೇ ಬೇಕಾಯಿತು.
ಸಹದತ್ತವರ್ಮ ತನ್ನ ಅಂಗಡಿಯಲ್ಲಿ ಕುಳಿತು ವ್ಯಾಪಾರ ಮಾಡುತ್ತಿದ್ದಾಗ ಒಬ್ಬ ಮಾರುವೇಷದ ಸನ್ಯಾಸಿ ರೂಪದಲ್ಲಿ ಬಂದು ಸಹದತ್ತವರ್ಮನ ಬಳಿ ಸಹಾಯ ಯಾಚಿಸಿ ಅವನ ವ್ಯಾಪಾರದ ಆಗುಹೋಗುಗಳ ಬಗ್ಗೆ ವಿಚಾರಿಸಿದ. ಆಗ ಸಹದತ್ತವರ್ಮ " ಪೂಜ್ಯರೇ, ನನ್ನ ನಿಯತ್ತಿನ ವ್ಯಾಪಾರದ ಫಲದಿಂದ ನಾನು ಚೆನ್ನಾಗಿದ್ದೇನೆ. ಆದರೆ ನಾನು ನನ್ನ ವ್ಯಾಪಾರದಲ್ಲಿ ಬೆಳೆಯಲು ಆಗುತ್ತಿಲ್ಲ. ಯಾವ ವ್ಯಾಪಾರ ಕೈಗೊಂಡರೆ ನಾನು ಹೆಚ್ಚು ಶ್ರೀಮಂತನಾಗಬಹುದು ? ಎಂಬುದನ್ನು ತಿಳಿಸಿ" ಎಂದ. ಆಗ ಮಾರುವೇಷದ ಸನ್ಯಾಸಿ " ಮಗು , ಜಗತ್ತಿನಲ್ಲಿ ಎಲ್ಲಾ ರೀತಿಯ ವ್ಯಾಪಾರಗಳೂ ನಡೆಯುತ್ತಿವೆ. ಆದರೆ ಮಾನವನಿಗೆ ಅಗತ್ಯವಾಗಿ ಬೇಕಾದ ಸಮಯದ ಅಂಗಡಿ ಎಲ್ಲೂ ಇಲ್ಲ. ಬಹಳಷ್ಟು ಜನರಿಗೆ ಸಮಯವೇ ಸಾಲುತ್ತಿಲ್ಲ. ಅದಕ್ಕಾಗಿ ನೀನು ಸೂರ್ಯದೇವನನ್ನು ಪೂಜಿಸಿ ಸಮಯದ ಅಂಗಡಿಯ ಮಾಲೀಕನಾಗು. ಕೆಲವೇ ದಿನಗಳಲ್ಲಿ ನೀನು ಜಗತ್ತಿನಲ್ಲೇ ಆಗರ್ಭ ಶ್ರೀಮಂತ ಆಗುವೆ" ಎಂದನು.
ಸಹದತ್ತವರ್ಮನ ಮನದಲ್ಲಿ ಸಹಯದ ಅಂಗಡಿ ತೆರೆಯುವ ಆಸೆ ಬೆಳೆಯತೊಡಗಿತು. ಸೂರ್ಯದೇವನ್ನು ಪ್ರಾರ್ಥಿಸಿದ. ಸಹದತ್ತವರ್ಮನ ಪ್ರಾರ್ಥನೆಯ ಫಲವಾಗಿ ಸೂರ್ಯದೇವ ಪ್ರತ್ಯಕ್ಷವಾಗಿ " ಭಕ್ತ ನಿನ್ನ ಆಸೆಯಿಂದ ಜಗತ್ತಿನ ಜೀವನದಲ್ಲಿ ಏರುಪೇರುಗಳು ಉಂಟಾಗುವವು. ಸ್ವಲ್ಪ ಯೋಚಿಸಿ ವರ ಕೇಳು" ಎಂದ. ಆದರೆ ಪಟ್ಟು ಬಿಡದೇ ಸಮಯದ ಅಂಗಡಿ ಗ್ರಾಮದಲ್ಲಿ ಬೇಕೆ ಬೇಕು ಎಂದು ಹಟ ಹಿಡಿದ. ಸೂರ್ಯದೇವ " ಆಗಲಿ, ನಿನ್ನ ಆಸೆಯಂತೆ ಸಮಯ ಮಾರುವ ಅಧಿಕಾರವನ್ನು ನಿನಗೆ ಕೊಡುತ್ತಿದ್ದೇನೆ. ಆದರೆ ಒಂದು ಮಾತನ್ನು ನೆನಪಿಡು. ನೀನು ಮಾರುವ ಸಮಯ ದುರ್ಭಳಕೆಯಾದರೆ ನಿನಗೆ ಘೋರ ಶಿಕ್ಷೆ ಯಾಗುವುದು ಎಚ್ಚರಿಕೆ " ಎಂದನು. ಸಹದತ್ತವರ್ಮನು ಎಚ್ಚರಿಕೆಯ ಮಾತುಗಳಿಗೆ ಗಮನಕೊಡದೇ ಸಮಯದ ಅಂಗಡಿಯನ್ನು ತೆರೆದನು.
ಸಮಯದ ಅಂಗಡಿಯಲ್ಲಿ ಜನರು ಸಮಯವನ್ನು ಕೊಳ್ಳಲು ಪ್ರಾರಂಭಿಸಿದರು. ದಿನಗಳೆದಂತೆ ಸಹದತ್ತವರ್ಮ ಶ್ರೀಮಂತ ವ್ಯಾಪಾರಿಯಾದ. ವ್ಯಾಪಾರ ಆಸೆಯಿಂದ ದಿನದ ಅವಧಿಯನ್ನು ಹೆಚ್ಚಿಸತೊಡಗಿದನು. ಜನರ ಜೀವನದಲ್ಲಿ ಏರುಪೇರುಗಳು ಪ್ರಾರಂಭವಾದವು. ಯಾವಾಗ ಮಲಗಬೇಕು. ಯಾವಾಗ ಯಾವ ಕೆಲಸ ಮಾಡಬೇಕು ಎಂದು ಗೊಂದಲಕ್ಕೊಳಗಾಗಿ ಪ್ರಕೃತಿಯ ಅವಘಡಗಳಿಗೆ ತುತ್ತಾಗತೊಡಗಿದರು. ಇದನ್ನು ಕಂಡು ಸೂರ್ಯದೇವನಿಗೆ ಕೋಪ ಬಂದಿತು. ಸೂರ್ಯದೇವ ಪ್ರತ್ಯಕ್ಷವಾಗಿ " ಸಹದತ್ತವರ್ಮ , ನಿನ್ನ ಲೋಭಿತನದಿಂದ ಜಗತ್ತಿನಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಿರುವೆ. ನಾನು ನಿನಗೆ ಮೊದಲೇ ಎಚ್ಚರಿಕೆ ನೀಡಿದ್ದೆ. ನನ್ನ ಎಚ್ಚರಿಕೆಯನ್ನು ಕಡೆಗಣಿಸಿದ ನೀನು ಮೊದಲಿಗಿಂತಲೂ ಹೀನ ಸ್ಥಿತಿಯಲ್ಲಿ ಬದುಕು. ಇನ್ನು ಜಗತ್ತಿನ ಎಲ್ಲ ಜೀವಿಗಳಿಗೂ ಒಂದೇ ಸಮಯವನ್ನು ನಿಗದಿಪಡಿಸುವೆ " ಎಂದು ಹೇಳಿ ಸೂರ್ಯ ದೇವ ಮಾಯವಾದ. ಸಹದತ್ತವರ್ಮನಿಗೆ ತನ್ನ ತಪ್ಪಿನ ಅರಿವಾಗಿ ಶಾಪದೊಂದಿಗೆ ಬದುಕಿದ.
=>> ವೆಂಕಟೇಶ ಚಾಗಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ