ಶುಕ್ರವಾರ, ಅಕ್ಟೋಬರ್ 2, 2026

ಲೀಡರ್ ಸಾನ್ವಿ | ಮಕ್ಕಳ ಕಥೆ | ವೆಂಕಟೇಶ ಚಾಗಿ | leader sanvi | makkala kathe | venkatesh chagi | children story

 *** ಲೀಡರ್ ಸಾನ್ವಿ ***


( ಮಕ್ಕಳ ಕಥೆ )

ಅಂದು ಸಂಜೆ ಸಪ್ಪೆ ಮೊರೆ ಹಾಕಿಕೊಂಡು ಸಾನ್ವಿ ಶಾಲೆಯಿಂದ ಮನೆಗೆ ಬಂದಳು. ಶಾಲಾ ಬ್ಯಾಗನ್ನು ಒಂದು ಮೂಲೆಗೆ ಎಸೆದು ತಾನು ಅದೇ ಮೂಲೆಯಲ್ಲಿ ಸುಮ್ಮನೆ ಕುಳಿತಳು. ಪ್ರತಿದಿನ ಮನೆಯಲ್ಲಿ ಗಲಾಟೆ ಎಬ್ಬಿಸುತ್ತಿದ್ದ ಸಾನ್ವಿ ಈ ದಿನ ಮಾತ್ರ ಶಾಂತವಾಗಿರುವುದು ಮನೆಯವರಿಗೆ ಏಕೋ ಸರಿ ಅನ್ನಿಸಲಿಲ್ಲ. "ಇಲ್ಲೊಂದು ಏನೋ ಸಮಸ್ಯೆ ಇದೆ" ಎಂದು ಹಾಸ್ಯ ಮಾಡಿದರು.

 "ಯಾಕೋ ಜ್ವಾಲಾಮುಖಿ ತುಂಬಾ ಶಾಂತವಾಗಿದೆಯಲ್ಲ. ಯಾವ ದೇವರು ಮೈಯೊಳಗೆ ಹೊಕ್ಕಿದೆ..?" ಎಂದು ಅಣ್ಣ ಅನ್ನುತ್ತಾ ಸಾನ್ವಿಯನ್ನು ಕಿಚಾಯಿಸುತ್ತಿದ್ದ. ಕೆಂಗಣ್ಣಿನಿಂದ ಅಣ್ಣನನ್ನು ನೋಡುತ್ತಾ ಸುಮ್ಮನೆ ಕುಳಿತುಕೊಂಡಿದ್ದಳು ಸಾನ್ವಿ. 

ಸುಮ್ಮನೆ ಕುಳಿತಿದ್ದ ಸಾನ್ವಿಯನ್ನು ಕಂಡು ಅಮ್ಮ ನಿಧಾನವಾಗಿ ಸಾನ್ವಿಯ ಬಳಿ ಬಂದು  "ಯಾಕೆ ಪುಟ್ಟಿ ಏನಾಯ್ತು ..? ಯಾಕೆ ಸಪ್ಪಾಗಿದ್ದೀಯಾ..? ಯಾರಾದರೂ ಏನಾದರೂ ನಿನಗೆ ಬೈದರೇ..?  ಏನಾಯ್ತು ಹೇಳು"  ಎಂದರು.  ಸಾನ್ವಿಯ ಕೋಪ ಇಳಿದಿರಲಿಲ್ಲ ಆದರೂ ಸಿಟ್ಟಿನಿಂದ,

" ನನಗೆ ಯಾರು ವೋಟು ಮಾಡಲಿಲ್ಲ. ಖುಷಿ , ಸಹನಾ , ರೇಖಾ ಎಲ್ಲರೂ ಪ್ರಾರ್ಥನಾ ಗೆ ವೋಟು ಮಾಡಿದ್ರು . ನನ್ನ ಫ್ರೆಂಡ್ಸ್ ಆಗಿ ಅವಳಿಗೆ ವೋಟು ಮಾಡಿದರು . ಎಲೆಕ್ಷನ್ ನಲ್ಲಿ ನಾನು ಸೋತೆ.  ಮಿಸ್ಸು ಪ್ರಾರ್ಥನಾಳನ್ನು ಕ್ಲಾಸ್ ಲೀಡರ್ ಮಾಡಿದ್ರು.."  
 
  ಎಂದು ದುಃಖಿಸುತ್ತಾ ತನ್ನ ಮುನಿಸನ್ನು ಅಮ್ಮನ ಬಳಿ ತೋಡಿಕೊಂಡಳು. "ಅಮ್ಮಾ..  ನಾನೂ ಲೀಡರ್ ಆಗಬೇಕು" ಅಂದಳು.  ಅಮ್ಮ.. ಸಾನ್ವಿಯನ್ನು ಸಮಾಧಾನ ಪಡಿಸಿದರು. 

"ಶಾಲೆಯಲ್ಲಿ ನೀನು ಲೀಡರ್ ಆಗದಿದ್ದರೆ ಏನಂತೆ ಮನೆಯಲ್ಲಿ ನೀನೇ ಲೀಡರ್ " ಎಂದರು. "ಎಲ್ಲಾ ಸುಳ್ಳು.. ಮನೆಯಲ್ಲಿ ಎಲೆಕ್ಷನ್ ಮಾಡಿಲ್ಲ . ನನಗೆ ಜಾಸ್ತಿ ವೋಟು ಬಿದ್ದರೆ ನಾನು ಗೆದ್ದು ಲೀಡರ್ ಆಗ್ತೀನಿ" ಅಂದಳು . 

ಅವಳ ಮಾತುಗಳನ್ನು ಮರೆಯಲ್ಲಿ ನಿಂತು ಕೇಳುತ್ತಿದ್ದ ಅಪ್ಪ ಬಂದು "ಸಾನ್ವಿ... ಈ ದಿನ ಮನೆಯಲ್ಲಿ ಎಲೆಕ್ಷನ್ ಮಾಡಿಬಿಡೋಣ. ನಿನಗೆ ಜಾಸ್ತಿ ವೋಟು ಬಿದ್ದರೆ ನೀನೇ ಲೀಡರ್ " ಎಂದರು ಅಪ್ಪ.  ಸಾನ್ವಿ ಒಪ್ಪಿಕೊಂಡಳು.

ಮನೆಯಲ್ಲಿ ಎಲೆಕ್ಷನ್ ಶುರುವಾಯಿತು, ಸಾನ್ವಿ ಹಾಗೂ ಪಪ್ಪ ಅಭ್ಯರ್ಥಿಗಳು.  ಎಲ್ಲರೂ ವೋಟಿಂಗ್ ಪ್ರಾರಂಭಿಸಿದರು. ವೋಟಿಂಗ್ ಗಿಂತಲೂ ಮುಂಚೆ ಸಾನ್ವಿ ಹಾಗೂ ಪಪ್ಪ ತಮಗೆ ವೋಟಿಂಗ್ ಮಾಡಲು ಮನೆಯಲ್ಲಿ ಪ್ರಚಾರ ಮಾಡಿದರು. ಸಾನ್ವಿ ಎಲ್ಲರ ಬಳಿ ತುಂಬಾ ಜೋಶ್ ನಿಂದ ಪ್ರಚಾರ ನಡೆಸಿ ಅಜ್ಜ ,  ಅಜ್ಜಿ , ಅಣ್ಣ , ಅಕ್ಕ ಎಲ್ಲರಿಗೂ ತನಗೆ ಓಟು ಹಾಕಲು ಹೇಳಿಕೊಂಡಳು.  

ವೋಟಿಂಗ್ ಪ್ರಾರಂಭವಾಯಿತು. ಮನೆಯ ಎಲ್ಲ ಸದಸ್ಯರು ವೋಟ್ ಮಾಡಿದರು . ತಾನೇ ಗೆಲ್ಲುವೆ ಎಂಬ ಉತ್ಸಾಹದಲ್ಲಿದ್ದಳು ಸಾನ್ವಿ . 

ಎಲೆಕ್ಷನ್ ನಂತರ ಕೌಂಟಿಂಗ್ ಪ್ರಾರಂಭವಾಯಿತು . ತಾತ ಎಲ್ಲರ ಎದುರು ಮತ ಎಣಿಕೆ ಮಾಡಿದರು. ಸಾನ್ವಿಗೆ ಅತ್ಯಧಿಕ ಮತಗಳು ಬಂದಿದ್ದವು. ತಾತ  ' ಸಾನ್ವಿಯೇ ಲೀಡರ್ ' ಎಂದು ಸಂತೋಷದಿಂದ ಘೋಷಿಸಿದರು.  ಅಪ್ಪ ಸೊನ್ನೆ ಮತಗಳನ್ನು ಪಡೆದಿದ್ದರು . ಸಾನ್ವಿ ಸಂತೋಷಗೊಂಡು ನಾನು ' ಲೀಡರ್ ಆದೆ ' ಎಂದು ಮನೆಯ ತುಂಬಾ ಕುಣಿದಾಡಿದಳು. ಮನೆಯ ಎಲ್ಲಾ ಸದಸ್ಯರು ಮನೆಯಲ್ಲಿ ಸಾನ್ವಿಯೇ ಲೀಡರ್ ಎಂದು ಸಾನ್ವಿಯನ್ನು ಎತ್ತಿಕೊಂಡು ಕುಣಿದಾಡಿದರು.



ವೆಂಕಟೇಶ ಚಾಗಿ

ಕಾಮೆಂಟ್‌ಗಳಿಲ್ಲ: