ಅಹಂಕಾರಿ ಮರ
( ಮಕ್ಕಳ ಕಥೆ )
ಆನಂದಪುರ ಎಂಬ ಊರಿನ ಹೊರವಲಯದಲ್ಲಿ ಒಂದು ದೊಡ್ಡದಾದ ಹುಣಸೆ ಮರವಿತ್ತು. ಆ ಮರದ ತುಂಬಾ ಹುಣಿಸೆ ಹಣ್ಣುಗಳು ತುಂಬಿಕೊಂಡಿದ್ದವು. ಹಾದಿಯಲ್ಲಿ ಹೋಗುತ್ತಿದ್ದ ಜನರು , ಮಕ್ಕಳು ಕಲ್ಲು ಬೀರಿ ಬಹಳಷ್ಟು ಹುಣಿಸೆ ಹಣ್ಣುಗಳನ್ನು ಸಂಗ್ರಹಿಸಿ ಮನೆಗೆ ತೆಗೆದುಕೊಂಡು ಹೋಗುತ್ತಿದ್ದರು. ಕೆಲವು ಜನರು ಆ ಮರದ ಕೆಳಗೆ ಕುಳಿತು ವಿಶ್ರಾಂತಿ ಪಡೆಯುತ್ತಿದ್ದರು. ಮಕ್ಕಳು ಮರದ ಕೆಳಗೆ ಆಟವಾಡುತ್ತಾ ಸಮಯ ಕಳೆಯುತ್ತಿದ್ದರು.
ಮರಕ್ಕೆ ತನ್ನ ಬಗ್ಗೆ ಬಹಳ ಹೆಮ್ಮೆ ಇತ್ತು . ಯಾವಾಗಲೂ ಜಂಭಕೊಚ್ಚಿಕೊಳ್ಳುತ್ತಿತ್ತು. ತನ್ನ ಬಗ್ಗೆ ತಾನೇ ಹೊಗಳಿಕೊಳ್ಳುತ್ತಿತ್ತು . ತಾನು ಎಲ್ಲ ಮನುಷ್ಯರಿಗೆ ಪ್ರಾಣಿಗಳಿಗೆ ಸಹಕಾರಿಯದ ಉಪಯುಕ್ತವಾದ ಮರ ಎಂದುಕೊಳ್ಳುತ್ತಿತ್ತು. ಅಕ್ಕ ಪಕ್ಕದ ಮರಗಳಿಗೆ " ನೋಡಿದರಾ.. ನಾನು ಎಲ್ಲರಿಗೂ ಎಷ್ಟೊಂದು ಉಪಕಾರಿಯಾಗಿರುವೆ. ನಾನೆಂದರೆ ಎಲ್ಲರಿಗೂ ಪಂಚಪ್ರಾಣ. ಎಲ್ಲರೂ ನನ್ನನ್ನು ಇಷ್ಟಪಡುತ್ತಾರೆ . ನಿಮ್ಮಿಂದ ಯಾರಿಗೂ ಉಪಯೋಗವಾಗುತ್ತಿಲ್ಲ. ನೀವು ಬದುಕುವುದೇ ವ್ಯರ್ಥ" ಎಂದು ಮೂದಲಿಸುತ್ತಿತ್ತು. ಅಕ್ಕಪಕ್ಕದಲ್ಲಿದ್ದ ಮರಗಿಡಗಳು ಹುಣಸಿ ಮರದೊಂದಿಗೆ ಏನನ್ನು ಮಾತನಾಡದೆ ಸುಮ್ಮನಿರುತ್ತಿದ್ದವು. ಹುಣಸೆ ಮರದ ಜಂಭ ಹಾಗೂ ಅಹಂಕಾರವನ್ನು ಕಂಡು ಅದರಿಂದ ದೂರವೇ ಉಳಿಯುತ್ತಿದ್ದವು. ಹುಣಸೆ ಮರದೊಂದಿಗೆ ಮಾತನಾಡದೆ ತಮ್ಮ ಪಾಡಿಗೆ ತಾವು ಬದುಕಿದ್ದವು.
ಮಳೆಗಾಲ ಪ್ರಾರಂಭವಾಯಿತು ಆಗಸದಲ್ಲಿ ಕಪ್ಪಾದ ಮೋಡಗಳು ಒಂದಡೆ ಸೇರಿದವರು. ಗುಡುಗುಡು , ಮಿಂಚು ಸಾಮಾನ್ಯವಾದವು. ಮಿಂಚುಗಳಿಗೆ ಸಣ್ಣಪುಟ್ಟ ಮರಗಳು ಹೆದರಿದರೂ ದೊಡ್ಡ ದೊಡ್ಡ ಮರಗಳು ಅವುಗಳಿಗೆ ಧೈರ್ಯ ಹೇಳಿದವು. " ನಾವಿರುವಾಗ ನೀವೆಲ್ಲ ಹೆದರಬೇಡಿ" ಎನ್ನುತ್ತಿದ್ದವು.
ಒಂದು ದಿನ ಜೋರಾದ ಬಿರುಗಾಳಿ ಬೀಸಿತು . ಕೆಲವು ಮರಗಳಿಗೆ ತುಂಬಾ ಭಯವಾಯಿತು. ಅತ್ತ ಇತ್ತ ಹೊರಳಾಡುತ್ತಿದ್ದವು. ಹುಣಸೆ ಮರ ಮಾತ್ರ ಗಟ್ಟಿಯಾಗಿ ನಿಂತು ಗಹಗಹಿಸಿ ನಗುತ್ತಾ "ನೋಡಿ.. ನಿಮ್ಮ ಬಳಿ ಶಕ್ತಿ ಇಲ್ಲ. ಗಾಳಿ ಮಳೆಗೆ ಎಷ್ಟೊಂದು ಹೆದರುತ್ತೀರಿ.." ಎಂದು ಮೂದಲಿಸಿತು..
ಗಾಳಿ ಜೋರಾಗತೊಡಗಿತು. ಹುಣಸೆ ಮರದಲ್ಲಿದ್ದ ಹಣ್ಣುಗಳು ಒಂದೊಂದಾಗಿ ಕೆಳಗೆ ಬೀಳತೊಡಗಿದವು. ಬಿರುಗಾಳಿಯ ಹೊಡೆತಕ್ಕೆ ಹುಣಸೆ ಮರದ ಹಣ್ಣುಗಳು ತಪ್ಪತಪ ಎಂದು ಕೆಳಗೆ ಬೀಳುತೊಡಗಿದವು. ಕೆಲವು ರೆಂಬೆ ಕೊಂಬೆಗಳು ಗಾಳಿಗೆ ಸಿಕ್ಕು ಮುರಿದು ಕೆಳಗೆ ಬಿದ್ದವು. ಬಿರುಗಾಳಿಯಿಂದಾಗಿ ಮರದಲ್ಲಿದ್ದ ಹಣ್ಣುಗಳೆಲ್ಲ ಉದುರಿ ಕೆಳಗೆ ಬಿದ್ದು ಹೋದವು. ರೆಂಬೆಕೊಂಬೆಗಳು ಜನರು ಓಡಾಡುತ್ತಿದ್ದ ರಸ್ತೆಯ ಮೇಲೆ ಮುರಿದು ಬಿದ್ದಿದ್ದವು.
ಬೆಳಗಾಗುತ್ತಿದ್ದಂತೆ ಜನರ ಹೋಡಾಟವು ಪ್ರಾರಂಭವಾಯಿತು. ರಸ್ತೆಯ ಮೇಲೆ ಬಿದ್ದಿದ್ದ ರಂಬೆ ಕೊಂಬೆಗಳನ್ನು ಜನರು ಕತ್ತರಿಸಿಕೊಂಡು ಹೋದರು. ಕೆಲವರು ಇನ್ನೂ ಮುರಿದು ಬೀಳಬಹುದು ಎಂಬ ಅನುಮಾನದಲ್ಲಿ ಇನ್ನಷ್ಟು ರೆಂಬೆ ಕೊಂಬೆಗಳನ್ನು ಕತ್ತರಿಸಿ ಹಾಕಿದರು . ಹುಣಸೆ ಮರವು ಬಹುಪಾಲು ಬೋಳಾಯಿತು.
ಒಂದೇ ದಿನದಲ್ಲಿ ಹಣ್ಣುಗಳಿಂದ ತುಂಬಿದ್ದ ಮರ ರಾತ್ರಿ ಕಳೆದು ಬೆಳಗಾಗುತ್ತಿದ್ದಂತೆ ಹಣ್ಣುಗಳೇ ಇಲ್ಲದೆ ರೆಂಬೆಕೊಂಬೆಗಳಿಲ್ಲದೆ ಬೋಳಾದ ಮರವಾಯಿತು. ಹುಣಸೆ ಮರಕ್ಕೆ ತುಂಬಾ ನಾಚಿಕೆಯಾಯಿತು. ಇತರ ಮರಗಳೊಂದಿಗೆ ಮಾತನಾಡಲು ಹಿಂಜರಿಯ ತೊಡಗಿತು. ಯಾವಾಗಲೂ ತಲೆತಗ್ಗಿಸಿಕೊಂಡು ನಿಲ್ಲತೊಡಗಿತು. ಇತರೆ ಮರಗಳು ಹುಣಸೆ ಮರದ ಸ್ಥಿತಿಯನ್ನು ಕಂಡು ಮರುಗಿದವು. " ಗೆಳೆಯ ವ್ಯಥೆ ಪಡಬೇಡ . ಮುಂದಿನ ದಿನಗಳಲ್ಲಿ ನೀನು ಮತ್ತೆ ಹಣ್ಣುಗಳಿಂದ ತುಂಬಿಕೊಳ್ಳವೆ. ಧೈರ್ಯ ತಂದುಕೊ" ಎಂದವು. ಇತರೆ ಮರಗಳ ಈ ಮಾತುಗಳನ್ನು ಕೇಳಿದ ಹುಣಸೆ ಮರಕ್ಕೆ ತನ್ನ ತಪ್ಪಿನ ಅರಿವಾಯಿತು. ಎಲ್ಲ ಮರಗಳಂತೆ ತಾನೂ ಇತರರೊಂದಿಗೆ ಸಹಬಾಳ್ವೆಯಿಂದ ಬದುಕಿತು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ