****ಪೂರ್ವಿ ಮತ್ತು ಸೈಕಲ್****
(ಮಕ್ಕಳ ಕಥೆ)
"ಆ ಸೈಕಲ್ ಎಷ್ಟು ಚೆನ್ನಾಗಿದೆ ಅಲ್ವಾ? ಅದರ ಮೇಲೆ ನಾನು ಕುಳಿತು ನೀನೂ ಕುಳಿತು ರಸ್ತೆಯ ಮೇಲೆ ಹೋಗುತ್ತಾ ಇದ್ದರೆ..... ತುಂಬಾ ಖುಷಿ ಅನ್ಸುತ್ತೆ ಅಲ್ವಾ ...? ಆದರೆ ಏನು ಮಾಡಲಿ ನನ್ನ ಬಳಿ ಸೈಕಲ್ ಇಲ್ವಲ್ಲ . ಛೆ ....ನನಗೂ ಒಂದು ಸೈಕಲ್ ಇರಬೇಕಿತ್ತು."
ಎಂದು ಪೂರ್ವಿ ಅಂದಾಗ ಪಕ್ಕದಲ್ಲಿದ್ದ ನಾಯಿಮರಿ ಪೂರ್ವಿಯನ್ನೇ ನೋಡುತ್ತಾ ಬಾಲ ಅಲ್ಲಾಡಿಸುತ್ತಿತ್ತು.
ಮೈದಾನದ ಒಂದು ಮೆಟ್ಟಿಲಿನ ಮೇಲೆ ಕುಳಿತು ಪ್ರತಿದಿನ ಅಕ್ಕ ಪಕ್ಕದ ಮನೆಗಳ ಮಕ್ಕಳು ಸೈಕಲ್ ಓಡಿಸುತ್ತಿರುವುದನ್ನು ನೋಡುತ್ತಾ ಪೂರ್ವಿ ತನ್ನ ಹತಾಶಯವನ್ನು ವ್ಯಕ್ತಪಡಿಸುತ್ತಿದ್ದಳು.
" ಪೂರ್ವಿ.... ಬಾ ಮನೆಗೆ " ಎಂದು ಯಾರೋ ಕರೆದಂತಾಯ್ತು, . ಹಿಂದಿರುಗಿ ನೋಡಿದಾಗ ಪೂರ್ವಿಯ ಅಪ್ಪ ರಸ್ತೆಯ ಮೇಲೆ ನಿಂತು ಕರೆಯುತ್ತಿದ್ದರು.
"ಹೇ.... ಚಿನ್ನಿ... ಬಾ ಅಪ್ಪ ಕರೆಯುತ್ತಿದ್ದಾರೆ "
ಏನ್ನುತ್ತಲೇ ಪೂರ್ವಿಯನ್ನು ಹಿಂಬಾಲಿಸಿಕೊಂಡು ನಾಯಿ ಮರಿ ಓಡಿ ಬಂದಿತು.
"ಸಂಜೆ ಆಗುತ್ತಾ ಬಂತು ..ಮನೆಗೆ ಹೋಗಿ ಓದುತ್ತಾ ಕುಳಿತುಕೊಳ್ಳಬಾರದೇನು. ಅಲ್ಲೇನೂ ನೋಡುತ್ತಾ ಕುಳಿತಿದ್ದಿ..? ಎಂದಾಗ ,
"ಅಪ್ಪ.. ನನಗೂ ಸೈಕಲ್ ಕೊಡಿಸಿ . ನನ್ನ ಸ್ನೇಹಿತರೆಲ್ಲ ಸೈಕಲ್ ನಲ್ಲಿ ಆಟ ಆಡುತ್ತಾ ಇದ್ದಾರೆ... ನನಗೂ ಸೈಕಲ್ ಬೇಕು" ಎಂದಳು.
"ಮೊದಲು ಚೆನ್ನಾಗಿ ಓದು. ಇನ್ನೂ ದೊಡ್ಡವಳಾದ ಮೇಲೆ ಕೊಡಿಸುತ್ತೇನೆ. ಈಗ ಮನೆಗೆ ಹೋಗಿ ಓದಿಕೋ" ಎಂದರು.
ಪೂರ್ವಿ ಪೆಚ್ಚುಮೋರೆ ಹಾಕಿಕೊಂಡು ಮನೆಯತ್ತ ಹೊರಟಳು.
ಮರುದಿನ ಪೂರ್ವವಿಯ ಹುಟ್ಟುಹಬ್ಬ . ಪ್ರತೀ ವರ್ಷ ಸಿಂಪಲ್ಲಾಗಿ ಆಚರಿಸಲಾಗುತ್ತಿತ್ತು . ಹುಟ್ಟುಹಬ್ಬಕ್ಕೆ ಒಂದು ಹೊಸ ಬಟ್ಟೆ ಪ್ರತಿ ವರ್ಷ ಅಪ್ಪ ಕೊಡಿಸುತ್ತಿದ್ದರು. ಅದರಂತೆ ಈ ವರ್ಷವೂ ಸಹ ಪೂರ್ವಿಗೆ ಹೊಸ ಬಟ್ಟೆ ದೊರೆಯಿತು. ಆ ದಿನ ಹೊಸ ಬಟ್ಟೆ ಹಾಕಿಕೊಂಡು ದಿನ ಪೂರ್ತಿ ತನ್ನ ಸ್ನೇಹಿತರೊಂದಿಗೆ ಕಾಲ ಕಳೆಯುವುದು ಪೂರ್ವಿಯ ಆ ದಿನದ ದಿನಚರಿ. ಸೈಕಲ್ ಇಲ್ಲದಿದ್ದರೂ ತನ್ನ ಸ್ನೇಹಿತರ ಮನೆಗೆ ನಡೆದುಕೊಂಡಿ ಹೋಗಿ ಅವರಿಗೆ ಸಿಹಿ ಹಂಚಿ ಬರುವುದು ಅವಳಿಗೆ ಖುಷಿ ತರುತ್ತಿತ್ತು.
ಅಂದು ಬೆಳಿಗ್ಗೆ ಹೊಸ ಬಟ್ಟೆ ಧರಿಸಿ ತನ್ನ ಸ್ನೇಹಿತರ ಮನೆಗೆ ಹೋಗಲು ಸಿದ್ದಳಾದಾಗ , ಅವಳನ್ನು ಮನೆಯ ಹೊರಗೆ ಬರಲು ಅಪ್ಪ ಹೇಳಿದರು. ಬಾಗಿಲ ಬಳಿ ಬರುತ್ತಿದ್ದಂತೆ ಪೂರ್ವಿಗೆ ಆಶ್ಚರ್ಯ ಹಾಗೂ ಸಂತೋಷಕ್ಕೆ ಪಾರವೇ ಇರಲಿಲ್ಲ. ಒಂದು ಪುಟ್ಟ ಸೈಕಲ್ ಬಾಗಿಲ ಬಳಿ ನಿಂತಿತ್ತು.
"ಪೂರ್ವಿ... ಈ ಸೈಕಲ್ ನಿನಗಾಗಿ.. ಈ ಹುಟ್ಟು ಹಬ್ಬದ ಸ್ಪೆಷಲ್ ಗಿಫ್ಟ್ ನಿನಗೆ" ಎಂದರು.
ಪೂರ್ವಿಗೆ ತುಂಬಾ ತುಂಬಾ ಖುಷಿ ಆಯ್ತು . ಸಂತೋಷಕ್ಕೆ ಬಾರವೇ ಇರಲಿಲ್ಲ . "ಥ್ಯಾಂಕ್ಯು ...ಥ್ಯಾಂಕ್ಯು ವೆರಿ ಮಚ್ ಪಪ್ಪಾ" ಎಂದಳು.
"ಬಾ ಚಿನ್ನಿ... ಒಂದು ರೌಂಡ್ ಹೋಗಿ ಬರೋಣ " ಎನ್ನುತ್ತಲೇ ನಾಯಿ ಮರಿ ಸೈಕಲ್ ನ ಹಿಂದಿನ ಸಿಟಿ ನ ಮೇಲೆ ಬಂದು ಕುಳಿತಿತು. ಪೂರ್ವಿ ಖುಷಿಯಿಂದ ತನ್ನ ಸ್ನೇಹಿತರ ಮನೆಯತ್ತ ಹೊರಟಳು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ